ಬಿ.ಪುಟ್ಟಸ್ವಾಮಯ್ಯ : -
27-5-1897- ಕನ್ನಡ ರಂಗಭೂಮಿಗೂ ಕನ್ನಡ ಸಾಹಿತ್ಯಕ್ಕೂ ವಿಶಿಷ್ಟ ಸೇವೆಯನ್ನು ಸಲ್ಲಿಸಿದ ಜನಪ್ರಿಯ ಸಾಹಿತಿ. ಹುಟ್ಟಿದ್ದು ಬೆಂಗಳೂರಿನಲ್ಲಿ. ತಾಯಿ ಮಲ್ಲಮ್ಮ. ತಂದೆ ಬಸಪ್ಪ. ಬಾಲ್ಯದ ವಿದ್ಯಾಭ್ಯಾಸ ಸುಲ್ತಾನ್ ಪೇಟೆಯ ಹಿಂದೂ ಎ.ವಿ. ಶಾಲೆಯಲ್ಲಿಯೂ ಕೋಟೆ ಮಾಧ್ಯಮಿಕ ಶಾಲೆಯಲ್ಲೂ ನಡೆಯಿತು. ಅನಂತರ ಸೇಂಟ್ ಜೋಸೆಫ್ ಕಾಲೇಜಿಗೆ ಸೇರಿದರಾದರೂ ತಂದೆಯನ್ನು ಕಳೆದುಕೊಂಡು ಸಂಸಾರದ ಜವಾಬ್ದಾರಿ ತಲೆಯ ಮೇಲೆ ಬಿದ್ದುದರಿಂದ ಆರನೆಯ ಫಾರಂವರೆಗೆ ಮಾತ್ರ ಓದುವುದು ಸಾಧ್ಯವಾಯಿತು. 

	ಬಾಲ್ಯದಿಂದಲೂ ಓದಿನ ಗೀಳು ಬಹಳ. ಸ್ವಂತ ಪರಿಶ್ರಮದಿಂದ ಕನ್ನಡ ಇಂಗ್ಲಿಷ್ ಸಂಸ್ಕøತ ಹಿಂದಿ ಬಂಗಾಳಿ ಮರಾಠಿ ಭಾಷೆಗಳನ್ನು ಪರಿಚಯ ಮಾಡಿಕೊಂಡು ಆಯಾ ಭಾಷೆಯ ಉತ್ತಮ ಗ್ರಂಥಗಳ ಸಾರವನ್ನು ಸಂಗ್ರಹಿಸಿದರು. ಶೇಕ್ಸ್‍ಪಿಯರ್, ಆಸ್ಕರ್ ವೈಲ್ಡ್, ಕಾಳಿದಾಸ, ಠಾಕೂರ್ ಮತ್ತು ಇತರ ಬಂಗಾಳಿ ಲೇಖಕರು ಶ್ರೀಯುತರ ಸಾಹಿತ್ಯ ರಚನೆಗೆ ಸ್ಫೂರ್ತಿ ನೀಡಿದ್ದಾರೆ. ಇವರ ಬದುಕು ಕಾರ್ಯಕ್ಷೇತ್ರ ವೈವಿಧ್ಯಮಯವಾದುದು. ನಾಟಕ ಸಾಹಿತ್ಯ, ರಂಗಭೂಮಿ ಆಸಕ್ತಿಯ ವಿಷಯಗಳಾದರೂ ಜೀವನ ನಿರ್ವಹಣೆಗೆ ಪತ್ರಿಕೋದ್ಯಮ ಕೈಕೊಂಡರು. ನ್ಯೂ ಮೈಸೂರ್, ಮೈಸೂರ್ ಸ್ಟಾರ್ ಪತ್ರಿಕೆಗಳಿಗೆ ಸುದ್ದಿಗಾರರಾದರು. ಒಕ್ಕಲಿಗರ ಪತ್ರಿಕೆ ಪ್ರಜಾಮತ, ಜನವಾಣಿ, ಮಾತೃಭೂಮಿ ಪತ್ರಿಕೆಗಳ ಸಂಪಾದಕರಾದರು. ಒಂದೆರಡು ವರ್ಷಗಳಲ್ಲಿ ಆ ಕೆಲಸ ಬಿಟ್ಟು ಪ್ರತಿಭಾ ಎಂಬ ಮಾಸಪತ್ರಿಕೆಯನ್ನು ಸ್ವಂತವಾಗಿ ಪ್ರಾರಂಭಿಸಿದರು. ಹಣದ ಮುಗ್ಗಟ್ಟಿನಿಂದ ಅದು ಹೆಚ್ಚು ಕಾಲ ನಡೆಯಲಿಲ್ಲ. ಬೇಸರದಿಂದ ಪತ್ರಿಕಾರಂಗವನ್ನು ತ್ಯಜಿಸಿದರು. ಪತ್ರಿಕೋದ್ಯಮಿಯಾಗಿದ್ದಾಗ ಅನೇಕ ಪ್ರಭಾವಂತರನ್ನು ಬೆಳಕಿಗೆ ತಂದರು. ಇತರ ಪತ್ರಿಕೋದ್ಯಮಿಗಳನ್ನು ಮನಸಾರೆ ಪ್ರೋತ್ಸಾಹಿಸಿ ಕೈಲಾದ ಸಹಾಯ ನೀಡಿದರು. ಶ್ರೀಮತಿ ಕಲ್ಯಾಣಮ್ಮನವರ ' ಸರಸ್ವತಿ ' ಶ್ರೀಯುತರಿಂದ ಸಹಾಯ ಪಡೆದ ಪತ್ರಿಕೆಗಳಲ್ಲಿ ಒಂದು. 

	ರಂಗಭೂಮಿಗೂ ಬಿ. ಪುಟ್ಟಸ್ವಾಮಯ್ಯನವರ ಬದುಕಿಗೂ ಅವಿನಾ ಸಂಬಂಧವಿದೆ. ತಮ್ಮ ಜೀವನದ ಬಹು ಭಾಗವನ್ನು ಈ ಕ್ಷೇತ್ರಕ್ಕೆ ಸಾರ್ಥಕವಾಗಿ ಸವೆಸಿದ್ದಾರೆ. ಇದಕ್ಕೆ ಶ್ರೀಯುತರು ಹುಟ್ಟಿ ಬೆಳೆದ ತುಳಸೀ ತೋಟದ ಪರಿಸರ ಕಾರಣವಾಗಿದೆ. ಬೆಂಗಳೂರಿನ ಚಿಕ್ಕ ಲಾಲ್‍ಬಾಗಿನ ತುಳಸೀತೋಟ ಹಿಂದೆ ರಂಗನಾಟಕಗಳು ಪ್ರದರ್ಶನವಾಗುತ್ತಿದ್ದ ಸ್ಥಳ. ಅಲ್ಲಿ ಪುಟ್ಟಸ್ವಾಮಯ್ಯನವರು ತಮ್ಮ ತಂದೆಯೊಡನೆ ಪಾರಸಿ ನಾಟಕಗಳನ್ನೂ, ವರದಾಚಾರ್ಯರ ನಾಟಕಗಳನ್ನೂ ನೋಡುತ್ತಿದ್ದರು. ನಾಟಕದ ಗೀಳು ಹೆಚ್ಚಿತು. ನಾಟಕ ರಚನೆಗೆ ಕೈಹಾಕಿದರು. ಷಾಜಹಾನ್ ಇವರ ಮೊದಲ ನಾಟಕ. ಇದು ದ್ವಿಜೇಂದ್ರಲಾಲ್ ರಾಯ್ ಅವರ ನಾಟಕದ ಅನುವಾದ. ಗೌತಮ ಬುದ್ಧ ಅನಂತರದ್ದು. ಇದು ಲೈಟ್ ಆಫ್ ಏಷ್ಯ ಗ್ರಂಥದಿಂದ ಪ್ರಭಾವಿತವಾದದ್ದು. ಈ ಎರಡೂ ನಾಟಕಗಳನ್ನು ಚಂದ್ರಕಲಾ ನಾಟಕ ಮಂಡಳಿಯ ಮಹಮದ್ ಪೀರ್ ರಂಗದ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿದರು. ಆ ಪ್ರದರ್ಶನಗಳ ಯಶಸ್ಸು ಪುಟ್ಟಸ್ವಾಮಯ್ಯನವರಲ್ಲಿ ಅಪಾರ ಉತ್ಸಾಹ ತಂದಿತು. ; ನಾಟಕ ರಚನೆಗೆ ಹೆಚ್ಚು ಧೀಶಕ್ತಿಯನ್ನು ಬಳಸುವಂತೆ ಪ್ರೇರೇಪಿಸಿತು. ಕುರುಕ್ಷೇತ್ರ, ಯಜ್ಞಸೇನಿ, ಅಕ್ಕಮಹಾದೇವಿ, ಸಂಪೂರ್ಣ ರಾಮಾಯಣ, ದಶಾವತಾರ, ಪ್ರಚಂಡ ಚಾಣಕ್ಯ ಬಿಡುಗಡೆಯ ಬಿಚ್ಚುಗತ್ತಿ ಮೊದಲಾದ ರಂಗನಾಟಕಗಳು ಸೃಷ್ಟಿಯಾದುವು. ನಾಟಕಗಳನ್ನು ಬರೆದು ಸುಮ್ಮನೆ ಕೂಡದೆ ಅವುಗಳ ರಂಗಪ್ರದರ್ಶನಕ್ಕಾಗಿ ವೃತ್ತಿ ಕಂಪನಿಗಳ ಜಾಡು ಹಿಡಿದು ಸುತ್ತಿದರು. ಅಭಿನಯ ಮುಖ್ಯವಾದುದರಿಂದ ರಂಗಭೂಮಿಯ ಸೌಲಭ್ಯ ಸಲಕರಣೆ ಸಾಧ್ಯಾಸಾಧ್ಯತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಾಟಕಗಳನ್ನು ರಚಿಸಿದರು. ಕಂಪನಿಗಳಲ್ಲಿ ಮೊಕ್ಕಾಂ ಮಾಡಿದರು. ರಂಗಭೂಮಿಯ ಅನುಭವವನ್ನು ಖುದ್ದಾಗಿ ಪಡೆದರು.

	ಜಿ. ಎಚ್. ವೀರಣ್ಣನವರ ಗುಬ್ಬಿ ಚನ್ನಬಸವೇಶ್ವರ ನಾಟಕ ಮಂಡಳಿಯು ಕುರುಕ್ಷೇತ್ರ, ದಶಾವತಾರ, ಅಕ್ಕಮಹಾದೇವಿ ನಾಟಕಗಳನ್ನು, ಎಂ.ಸಿ. ಮಹಾದೇವಸ್ವಾಮಿಯವರ ಕನ್ನಡ ಥಿಯೇಟರ್ಸ್ ಸಂಪೂರ್ಣ ರಾಮಾಯಣ, ಚಿರಕುಮಾರಸಭಾ ನಾಟಕಗಳನ್ನು ಬೆಂಗಳೂರು, ಮೈಸೂರು ಮೊದಲಾದ ಸ್ಥಳಗಳಲ್ಲಿ ಅದ್ದೂರಿಯಾದ ರಂಗ ವೈಭವದೊಡನೆ, ಪ್ರಸಿದ್ಧ ರಂಗ ನಟನಟಿಯರ ಸಹಕಾರದಿಂದ ಸಾವಿರಾರು ಪ್ರದರ್ಶನಗಳನ್ನು ನೀಡಿದುವು. ಇವರ ನಾಟಕಗಳಲ್ಲಿ ಅಭಿನಯಿಸಿ, ಹೆಸರುವಾಸಿಯಾದ ಅನೇಕ ರಂಗಭೂಮಿಯ ಕಲಾವಿದರು ಮುಂದೆ ಚಲನಚಿತ್ರಕ್ಕೆ ಪ್ರವೇಶಿಸಿ ಕೀರ್ತಿ ಗಳಿಸಿದ್ದು ಗಮನಾರ್ಹ ವಿಷಯ. ಪೌರಾಣಿಕ ವಸ್ತುವೇ ಹಲವು ನಾಟಕಗಳಿಗೆ ಸ್ಫೂರ್ತಿ ನೀಡಿದ್ದರೂ ಚಾರಿತ್ರಿಕ ಸಾಮಾಜಿಕ ವಸ್ತುವನ್ನೊಳಗೊಂಡ ನಾಟಕಗಳನ್ನೂ ಇವರು ರಚಿಸಿದ್ದಾರೆ. ಸಿಂಹಳ ವಿಜಯ, ಗೌತಮ ಬುದ್ಧ, ಅಕ್ಕಮಹಾದೇವಿ ಕಾವ್ಯಮಯವಾದ ಸರಳ ರಗಳೆಯಲ್ಲಿವೆ. ಆಕರ್ಷಕ ಹಾಡುಗಳು, ಸುಸಂಸ್ಕøತ ಭಾಷೆ ಚುರುಕಾದ ಸಂಭಾಷಣೆಗಳಿಂದ ಇವರ ನಾಟಕಗಳು ಕಂಪನಿಗಳ ಹಾಗೂ ಹವ್ಯಾಸಿ ಕಲಾವಿದರ ಅಭಿನಯಕ್ಕೆ ಹೇಳಿಮಾಡಿಸಿದಂತಿದೆ. ಶ್ರೀಯುತರ ನಾಟಕಗಳಿಂದ ವೃತ್ತಿನಾಟಕ ಸಂಸ್ಥೆಗಳ ಭಾಷಿಕ ಮಟ್ಟ ಉತ್ತಮವಾಯಿತು. ಕನ್ನಡ ನಾಟಕ ಸಾಹಿತ್ಯ ಕ್ಷೇತ್ರ ಶ್ರೀಮಂತವಾಯಿತು ; ಸಂಗೀತವೇ ಪ್ರಧಾನವಾಗಿದ್ದ ರಂಗಭೂಮಿಯನ್ನು ನಿಜವಾದ ನಾಟಕ ಪ್ರವೇಶಿಸಿತು.

	ಬಿ. ಪುಟ್ಟಸ್ವಾಮಯ್ಯನವರು ಹಲವು ಕಾದಂಬರಿಗಳನ್ನೂ ಬರೆದಿದ್ದಾರೆ. ಪ್ರೌಢದೇವರಾಯನ ಕಾಲಕ್ಕೆ ಸಂಬಂಧಿಸಿದ ರೂಪರೇಖಾ ಪ್ರಥಮ ಕಾದಂಬರಿ. ಮಲ್ಲಮ್ಮನ ಪವಾಡ ಜನಪ್ರಿಯ ಕಾದಂಬರಿಗಳಲ್ಲೊಂದು. ಚಾರಿತ್ರಿಕ ಮೌಲ್ಯವನ್ನಾಧರಿಸಿ ನಾಟಕವನ್ನಾಗಲಿ ಕಾದಂಬರಿಯನ್ನಾಗಲಿ ನಿರರ್ಗಳವಾಗಿ ಬರೆಯುವುದರಲ್ಲಿ ಶ್ರೀಯುತರದು ಎತ್ತಿದ ಕೈ. ಶಿವಶರಣರಲ್ಲಿ ಅಗ್ರಗಣ್ಯನಾದ, ಸಮಾಜ ಸುಧಾರಕ, ಕ್ರಾಂತಿಕಾರಿ ಬಸವಣ್ಣನ ಜೀವನಕಾಲವನ್ನು ಕುರಿತು ಬರೆದ ಉದಯರವಿ, ರಾಜ್ಯಪಾಲ, ಕಲ್ಯಾಣೇಶ್ವರ, ನಾಗಬಂಧ, ಮುಗಿಯದ ಕನಸು, ಕ್ರಾಂತಿಕಲ್ಯಾಣ ಕಾದಂಬರಿಗಳು ಉತ್ತಮವಾಗಿವೆ. ಕ್ರಾಂತಿ ಕಲ್ಯಾಣ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರಕಿದೆ (1964). ನಾಟಕಕಾರರಾಗಿದ್ದವರು ರಾಷ್ಟ್ರಮಟ್ಟದ ಕಾದಂಬರಿಕಾರರಾದರು.  ಬಸವಣ್ಣನವರನ್ನು ಕುರಿತ ಕಾದಂಬರಿಗಳು, ಲೇಖಕರ ಸಂಶೋಧನ ಪರಿಶ್ರಮ, ಆಳವಾದ ಅಭ್ಯಾಸ, ಸೃಜನಶೀಲಶಕ್ತಿಗಳ ದ್ಯೋತಕಗಳಾಗಿವೆ. ಅವು ಸುಮಾರು ಆರು ವರ್ಷಗಳ ತಪಸ್ಸಿನ ಫಲ. ಅವುಗಳ ಜೊತೆಗೆ ಚಾಲುಕ್ಯ, ತೈಲಪ, ಅಭಿಸಾರಿಕ, ಹೂವು ಕಾವು ಮೊದಲಾದ ಕಾದಂಬರಿಗಳನ್ನು ಬರೆದಿದ್ದಾರೆ.

	ಧ್ರುವಸ್ವಾಮಿನಿ, ಇತಿಹಾಸದ ಪುಟಗಳಿಂದ ಹಾಗೂ ನಾಟ್ಯಮೋಹಿನಿ ಎಂಬ ಕಥಾಸಂಗ್ರಹಗಳಲ್ಲಿ ಪುಟ್ಟಸ್ವಾಮಯ್ಯನವರ ಕಥನ ಶೈಲಿ ವೇದ್ಯವಾಗುತ್ತದೆ. ಶ್ರೀದುರ್ಗಾ, ಚಂಗಲೆಯ ಬಲಿದಾನ ಎಂಬುವು ಮಕ್ಕಳ ನಾಟಕಗಳು. ಇವನಲ್ಲ ಎಂಬುದು ತಾರಾ ಶಂಕರ ರಾಯ್ ಅವರ ಬಂಗಾಲಿ ಕಾದಂಬರಿಯ ಅನುವಾದ. ನಾಟ್ಯರಂಗ-ಚಿತ್ರರಂಗ ಎಂಬುದು ಪ್ರಬಂಧ ಸಂಕಲನ. ಸಿದ್ದವ್ವನಹಳ್ಳಿ ನಿಜಲಿಂಗಪ್ಪ ಎಂಬ ಗ್ರಂಥ ಅವರ ಜೀವನ ಪರಿಚಯ.

	ಬಿ. ಪುಟ್ಟಸ್ವಾಮಯ್ಯನವರಿಗೆ ಕವಿತೆ ಬರೆಯುವುದರಲ್ಲಿಯೂ ಆಸಕ್ತಿ ಉಂಟು. ಪಂಡಿತ ತಾರಾನಾಥರ ಪ್ರೇಮ ಪತ್ರಿಕೆಯಲ್ಲಿ ಇವರ ಇಪ್ಪತ್ತಕ್ಕೂ ಹೆಚ್ಚು ಕವಿತೆಗಳು ಮಾರ್ದನಿ ಎಂಬ ಹೆಸರಿನಿಂದ ಬೆಳಕು ಕಂಡಿವೆ. ಶ್ರೀದುರ್ಗಾ ಸಪ್ತಶತೀ (ದೇವಿ ಮಹಾತ್ಮ್ಯದ ಕನ್ನಡ ರೂಪ) ಲಲಿತ ಸಹಸ್ರ ಸಾಹಿತ್ಯ, ಶ್ರೀ ರುದ್ರ ತ್ರಿಶತಿ, ಕಾಳಿದಾಸನ ಕುಮಾರ ಸಂಭವಗಳನ್ನು ಸಾಂಗತ್ಯದಲ್ಲಿ ರಚಿಸಿದ್ದಾರೆ. ಇವರ ಕುರುಕ್ಷೇತ್ರ ನಾಟಕ ತೆಲುಗು ಭಾಷೆಗೂ ಕ್ರಾಂತಿ ಕಲ್ಯಾಣ ಕಾದಂಬರಿ ಮಾಲಿಕೆಗಳು ಹಿಂದಿ ಭಾಷೆಗೂ ಅನುವಾದವಾಗಿವೆ. ಶ್ರೀಯುತರಿಗೆ ಚಲನಚಿತ್ರೋದ್ಯಮದ ಅನುಭವವೂ ಇದೆ. ಸುಭದ್ರಾ, ಜೀವನ ನಾಟಕ ಚಿತ್ರಗಳಿಗೆ ಸಾಹಿತ್ಯ ಒದಗಿಸಿದುದಲ್ಲದೆ ಸಹನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಇವರ ಮಲ್ಲಮ್ಮನ ಪವಾಡ ಚಲನಚಿತ್ರವಾಗಿದೆ.

	ಬಿ. ಪುಟ್ಟಸ್ವಾಮಯ್ಯನವರಿಗೆ ಬಾಲ್ಯದಿಂದಲೂ ಬಡತನದ ಅನುಭವ. ರೇಷ್ಮೆ ವ್ಯಾಪಾರಿಯಾಗಿದ್ದ ತಂದೆ ತೀರಿಕೊಂಡ ಮೇಲೆ ಚಿಕ್ಕಂದಿನಲ್ಲೇ ಸಂಸಾರದ ಹೊರೆ ಹೊರಬೇಕಾಯಿತು. ಇಪ್ಪತ್ತನೆಯ ವಯಸ್ಸಿಗೆ ಪತ್ರಿಕೋದ್ಯಮಿಯಾಗಿ ದುಡಿಯಲು ಪ್ರಾರಂಭಿಸಿದರು. ಹೆಂಡತಿ ಮುದ್ದಮ್ಮನವರು ದೀರ್ಘಕಾಲ ಕಾಯಿಲೆ ಬಿದ್ದರು. ಈ ದಂಪತಿಗಳಿಗೆ ಉಷಾ ಒಬ್ಬರೇ ಪ್ರೀತಿಯ ಸಾಕುಮಗಳು. ಬದುಕಿನ ಬವಣೆಗಳನ್ನೆಲ್ಲ ಕಂಡುಂಡ ಶ್ರೀಯುತರದು ಸರಳವಾದ ಜೀವನ. ಇದ್ದುದರಲ್ಲೇ ತೃಪ್ತಿಪಡುವ ಸ್ವಭಾವ. ತುಂಬುಜೀವನದ ಇವರು ಜೀವನೋಪಾಯಕ್ಕೆ ಸಾಹಿತ್ಯವನ್ನು ವಿಶೇಷವಾಗಿ ಬಳಸಿಕೊಳ್ಳಲಿಲ್ಲ. ಅದರಿಂದ ದೊರೆತ ಉತ್ಪತ್ತಿಯೂ ಅಷ್ಟಕ್ಕಷ್ಟೆ. ಜೀವನಕ್ಕೆ ಪತ್ರಿಕೋದ್ಯಮ ; ಅನುಭವದ ಅಭಿವ್ಯಕ್ತಿಗೆ ಸಾಹಿತ್ಯ.

	ಬಿ ಪುಟ್ಟಸ್ವಾಮಯ್ಯನವರ ಸಾಹಿತ್ಯ ಸೇವೆಯನ್ನು ಜನತೆ ಹೃತ್ಪೂರ್ವಕವಾಗಿ ಸ್ವಾಗತಿಸಿ ಗೌರವಿಸಿದೆ. ಮೈಸೂರು ಸರ್ಕಾರದ ಸಾಹಿತ್ಯ ವಿಭಾಗ ಇವರ ಕುರುಕ್ಷೇತ್ರ ನಾಟಕಕ್ಕೆ ಪ್ರಶಸ್ತಿ ನೀಡಿತು. ರಾಜ್ಯ ಸರ್ಕಾರದಿಂದ 1965ರಲ್ಲಿ ಶ್ರೀಯುತರಿಗೆ ರಾಜ್ಯಪ್ರಶಸ್ತಿ ದೊರೆಯಿತು. 1972ರಲ್ಲಿ ಬಿ.ಎನ್. ಗುಪ್ತರ ಜನ್ಮಭೂಮಿ ಟ್ರಸ್ಟ್ ಧನಸಹಾಯ ಮಾಡಿ ಸನ್ಮಾನಿಸಿತು. ಕರ್ನಾಟಕ ಪತ್ರಕರ್ತರ ಸಂಘದವರು ಅಭಿವಾದನ ಸಂಚಿಕೆಯನ್ನು ಅರ್ಪಿಸಿ 1977 ಗೌರವಿಸಿದರು. 1978ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಫೆಲೊಶಿಪ್ ಸಿಕ್ಕಿತು. ಭಾರತೀಯ ಧರ್ಮ ಸಮ್ಮೇಳನದ ಮೂರನೆಯ ಅಧಿವೇಶನದಲ್ಲಿ (1979) ಶ್ರೀಯುತರಿಗೆ ಪತ್ರಿಕೋದ್ಯಮ ರತ್ನ ಎಂಬ ಬಿರುದನ್ನು ನೀಡಲಾಯಿತು. ಹಲವು ಸಂಘ ಸಂಸ್ಥೆಗಳಿಂದ ಸನ್ಮಾನ ಸಮಾರಂಭಗಳೂ ನಡೆದಿವೆ. ಕರ್ನಾಟಕ ರಾಜ್ಯ ಸರ್ಕಾರ ಮಾಸಾಶನ ನೀಡಿದೆ. ಬದುಕಿನ ಸಂಕೀರ್ಣ ಅನುಭವಗಳನ್ನು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಅಭಿವ್ಯಕ್ತಿಸಿದ ಬಿ. ಪುಟ್ಟಸ್ವಾಮಯ್ಯನವರ ಬದುಕು-ಬರಹ ಸಾರ್ಥಕವಾದುವು.			
(ಡಿ.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ